ಮೈಸೂರು: 'ಪಶುಪಾಲನಾ ಇಲಾಖೆಗೆ 700 ಮಂದಿ 'ಡಿ' ಗ್ರೂಪ್ ನೌಕರರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ದಿನಗಳ ಹಿಂದೆಯಷ್ಟೆ ಅನುಮತಿ ನೀಡಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು' ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಹಯೋಗದಲ್ಲಿ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಶುವೈದ್ಯರ ರಾಜ್ಯಮಟ್ಟದ ತಾಂತ್ರಿಕ ವಿಚಾರಸಂಕಿರಣ ಮತ್ತು ಕಾಲುಬಾಯಿ ಜ್ವರದ ವಿರುದ್ಧ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಬಂದ ಮೇಲೆ 400 ಪಶುವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದೇವೆ. 400 ಕಾಯಂ ವೈದ್ಯರ ನೇಮಕಾತಿಗೆ ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ. ಇಲಾಖೆಯಲ್ಲಿರುವ ಕೊರತೆಗಳ ಬಗ್ಗೆ ಅರಿವಿದ್ದು, ಅವುಗಳನ್ನು ನೀಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ' ಎಂದರು.
'ರಾಜ್ಯದಲ್ಲಿ ಪ್ರತಿ ವರ್ಷ 400 ಮಂದಿ ಪಶು ವೈದ್ಯ ಪದವಿ ಪಡೆದು ಹೊರಬರುತ್ತಿದ್ದಾರೆ. ಖಾಸಗಿ ಪಶುವೈದ್ಯ ಕಾಲೇಜು ಆರಂಭಿಸಲು ಕೆಲವರು ಇಲಾಖೆಯನ್ನು ಸಂಪರ್ಕಿಸಿದ್ದರು. ಆ ಕಡತ ನನ್ನ ಬಳಿಗೆ ಬಂದಿತ್ತು.
ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಎಸ್.ಪಾಳೇಗಾರ ಮಾತನಾಡಿ, 'ರಾಜ್ಯದಲ್ಲಿ 4,564 ಪಶುವೈದ್ಯಕೀಯ ಸಂಸ್ಥೆಗಳಿವೆ. 5 ಕೋಟಿ ಕೋಳಿ ಹಾಗೂ 3 ಕೋಟಿ ಜಾನುವಾರು ಇವೆ. ಹಾಲು ಉತ್ಪಾದನೆಯಲ್ಲಿ ರಾಜ್ಯ 5ನೇ ಸ್ಥಾನದಲ್ಲಿದೆ. ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯ ಇತರ ರಾಜ್ಯಗಳಿಗಿಂತ ಮುಂದಿದೆ' ಎಂದು ಹೇಳಿದರು.