M B Patil ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಲಿದೆ?

Bhima Samskruthi
By -

ಬೆಂಗಳೂರು, ನವೆಂಬರ್ 30: ಉದ್ಯಾನ ನಗರಿ ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ?. ರಾಜ್ಯ ಸರ್ಕಾರದಿಂದ ಈ ಯೋಜನೆ ಕುರಿತು ಪ್ರಸ್ತಾವನೆ ಬಂದ ಬಳಿಕ ಕಾಡುತ್ತಿರುವ ಪ್ರಶ್ನೆ ಇದಾಗಿದೆ. ಸರ್ಕಾರ ಎರಡನೇ ವಿಮಾನ ನಿಲ್ದಾಣ ಯೋಜನೆ ವಿಚಾರದಲ್ಲಿ ವಿಳಂಬ ಮಾಡುತ್ತಿದೆಯೇ?

ಎಂಬ ಪ್ರಶ್ನೆಯೂ ಎದ್ದಿದೆ. ಸದ್ಯ ಯೋಜನೆ ಕುರಿತು ಅಪ್‌ಡೇಟ್ ಒಂದು ಸಿಕ್ಕಿದೆ. ಸರ್ಕಾರ ಸ್ಥಳ ಅಂತಿಮಗೊಳಿಸಿದ್ದು, ಎಎಐಗೆ ಈ ವಾರದಲ್ಲಿಯೇ ಈ ಯೋಜನೆ ಕುರಿತು ವರದಿ ಸಲ್ಲಿಕೆಯಾಗಲಿದೆ.

ಸಿಎನ್‌ಬಿಸಿ ಟಿವಿ18- ಮನಿ ಕಂಟ್ರೋಲ್ ಗ್ಲೋಬರ್ ಎಐ ಕಾನ್‌ಕ್ಲೇವ್ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ಎಂ. ಬಿ. ಪಾಟೀಲ ಬೆಂಗಳೂರು ನಗರದ

2ನೇ ವಿಮಾನ ನಿಲ್ದಾಣ ಯೋಜನೆ ಕುರಿತು ಮಾತನಾಡಿದ್ದಾರೆ.

ಎಂ. ಬಿ. ಪಾಟೀಲ್ ಮಾತನಾಡಿ, "ಕರ್ನಾಟಕ ಸರ್ಕಾರ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಯೋಜನೆ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಗೆ ಈ ವಾರದಲ್ಲಿ ಪ್ರಸ್ತಾವನೆ ಸಲ್ಲಿಸಲಿದೆ" ಎಂದು ಹೇಳಿದರು. ತಮಿಳುನಾಡು ಸರ್ಕಾರ ಬೆಂಗಳೂರು ಸಮೀಪದ ಹೊಸೂರಿನಲ್ಲಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಘೋಷಣೆ ಮಾಡಿದ ಬಳಿಕ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಯೋಜನೆ ಕುರಿತು ಚರ್ಚೆಗಳು ನಡೆಯುತ್ತಿವೆ.

ಎಲ್ಲಿ ವಿಮಾನ ನಿಲ್ದಾಣ ಸ್ಥಾಪನೆ? ಸಚಿವ ಎಂ. ಬಿ. ಪಾಟೀಲ್ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಲಿದೆ? ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ, "ಈ ವಾರ ನಾವು ಎಎಐಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಿದ್ದೇವೆ. ಬೆಂಗಳೂರಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು 2ನೇ ವಿಮಾನ ನಿಲ್ದಾಣದ ಸ್ಥಳವನ್ನು ಗುರುತಿಸಿದ್ದೇವೆ. ನಗರದ ಅಗತ್ಯ, ಐತಿಹಾಸಿಕ ಅಭಿವೃದ್ಧಿಯನ್ನು ಪರಿಗಣಿಸಿ ಸ್ಥಳವನ್ನು ಗುರುತಿಸಲಾಗಿದೆ" ಎಂದು ಸಚಿವರು ಹೇಳಿದರು.



Tags: