ಮುದ್ದೇಬಿಹಾಳ : ಈ ಭಾಗದಲ್ಲಿ ಪ್ರಗತಿಯಲ್ಲಿರುವ ಬೂದಿಹಾಳ-ಪೀರಾಪೂರ ಹಾಗೂ ನಾಗರಬೆಟ್ಟ ಏತ ನೀರಾವರಿ ಯೋಜನೆಗಳನ್ನು ಶೀಘ್ರವೇ ದಿನಾಂಕ ನಿಗದಿ ಮಾಡಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಕೆಎಸ್‌ಡಿ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.
ತಾಲ್ಲೂಕಿನ ನಾಲತವಾಡದ ಸಮೀಪದಲ್ಲಿರುವ ಅಮರೇಶ್ವರ ದೇವಸ್ಥಾನದ ಬಳಿ ಸ್ಥಗಿತಗೊಂಡಿದ್ದ ಚಿಮ್ಮಲಗಿ ಏತ ನೀರಾವರಿ ಪೂರ್ವ ಕಾಲುವೆಯ ಬಾಕಿ ಕಾಮಗಾರಿಗೆ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಗುರುವಾರ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸುಮಾರು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ಚಿಮ್ಮಲಗಿ ಏತ ನೀರಾವರಿ ಪೂರ್ವ ಕಾಲುವೆಯ ಕಿಮೀ 19.600 ರ ರಸ್ತೆಗೆ ಅಡ್ಡಲಾಗಿ ನಿರ್ಮಿಸುವ ಕಾಲುವೆ 33.57 ಲಕ್ಷ ಮೊತ್ತದ ಸೇತುವೆಗೆ ಚಾಲನೆ ನೀಡಲಾಗಿದೆ. ಸದ್ಯ ಚಾಲನೆ ನೀಡಲಾದ ಸೇತುವೆ ಕಾಮಗಾರಿಗೆ ಪ್ಯಾಕೇಜ್ ಕಾಮಗಾರಿಯಲ್ಲಿ ಸೇರಿಸಲಾಗಿತ್ತು. ಮನಬಂದAತೆ ಯಾರಿಗೂ ಗುತ್ತಿಗೆ ಕೊಡಬಾರದು ಎನ್ನುವ ಉದ್ದೇಶದಿಂದ ವಿಳಂಬವಾಯಿತು. ಸಿಂಗಲ್ ಗುತ್ತಿಗೆ ಅವೈಜ್ಞಾನಿಕವಾಗಿತ್ತು. ಪ್ಯಾಕೇಜ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕಾಮಗಾರಿ ವಿಳಂಬವಾಯಿತು ಎಂದರು.
ರೈತರ ಅಡೆತಡೆ ಮತ್ತು ಗುತ್ತಿಗೆಯ ತಾಂತ್ರಿಕ ದೋಷದ ಪರಿಣಾಮ ಹಲವು ಬಾರಿ ಕಾಮಗಾರಿ ವಿಳಂಬವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಈಗ ಕೆಲಸ ಶುರು ಮಾಡಲಾಗುತ್ತದೆ ಎಂದರು.ನಮ್ಮ ಭಾಗದ ನಾಗರಬೆಟ್ಟ ಹಾಗೂ ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯೂ ಸಹ ಬಹುತೇಕ ಪೂರ್ಣಗೊಂಡಿದ್ದು ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು ಎಂದರು.