ಬೆಂಗಳೂರು : ಪ್ರಯಾಣ ದರ ಏರಿಕೆ ಒಂದೆಡೆಯಾದರೆ, ಬೆಂಗಳೂರು ನಮ್ಮ ಮೆಟ್ರೋ ವಿಸ್ತರಣೆ ಕಾಮಗಾರಿ ಕೂಡಾ ಜೋರಾಗಿ ನಡೆಯುತ್ತಿದೆ. ನಮ್ಮ ಮೆಟ್ರೋದ ಅತಿ ಉದ್ದದ ಭೂಗತ ಕಾರಿಡಾರ್ (ಅಂಡರ್ ಗ್ರೌಂಡ್) ಆಗಿರುವ ಪಿಂಕ್ ಲೈನ್‌ನ ಕಾಮಗಾರಿ ಶೇಕಡಾ 93.13ರಷ್ಟು ಪೂರ್ಣಗೊಂಡಿದೆ. ಆದರೆ, ಈ ಮಾರ್ಗದಲ್ಲಿ ಪ್ರಯಾಣಿಸಲು ಇನ್ನೂ ಸುಮಾರು 2 ವರ್ಷಗಳ ಕಾಲ ಕಾಯಬೇಕು. ಏಕೆಂದರೆ, ವಾಣಿಜ್ಯ ಕಾರ್ಯಾಚರಣೆಯು 2026ರ ಡಿಸೆಂಬರ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.
21.26 ಕಿ.ಮೀ ಉದ್ದದ ಈ ಮಾರ್ಗವು ಕಾಳೇನ ಅಗ್ರಹಾರದಿಂದ ಎಂ.ಜಿ. ರಸ್ತೆ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದೆ. ವಿಶೇಷವೆಂದರೆ, ಹೆಚ್ಚಿನ ಮಾರ್ಗವು ಅಂಡರ್‌ಗ್ರೌಂಡ್‌ನಲ್ಲಿ ಇರಲಿದೆ. ಒಟ್ಟು 13.89 ಕಿ.ಮೀ ಭೂಗತ ವಿಭಾಗ ಮತ್ತು 7.37 ಕಿ.ಮೀ ಮಾರ್ಗ ಭೂಮಿಯ ಮೇಲೆ (ಎಲಿವೇಟೆಡ್) ಇರಲಿದೆ. ಬಿಎಂಆರ್‌ಸಿಎಲ್ ಇತ್ತೀಚೆಗಷ್ಟೇ ಎಂಜಿ ರಸ್ತೆ ನಿಲ್ದಾಣದ ಮಾಹಿತಿ ನೀಡಿತ್ತು. ಇದು ಭೂಮಿಯ ಮೇಲ್ಪದರಕ್ಕಿಂತ 65 ಅಡಿ ಭೂಗತವಾಗಿದ್ದು, 93,775 ಚದರ ಅಡಿ ವ್ಯಾಪಿಸಿದೆ. ಈ ಲೈನ್ ಪಿಂಕ್ ಮತ್ತು ನೇರಳೆ ಮಾರ್ಗಗಳ ನಡುವಿನ ಇಂಟರ್‌ಚೇಂಜ್ ಸ್ಟೇಷನ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ತಿಳಿಸಿದೆ.
ಪಿಂಕ್ ಲೈನ್‌ನ ಅಂಡರ್‌ಗ್ರೌಂಡ್ ವಿಭಾಗದ ನಿರ್ಮಾಣಕ್ಕೆ ಸಾಕಷ್ಟು ಸವಾಲು ಎದುರಾದವು. ಉದ್ಯಾನ ನಗರಿಯ ಸಂಕೀರ್ಣ ಭೂವಿಜ್ಞಾನದಿಂದಾಗಿ ಸುರಂಗ ನಿರ್ಮಾಣವೂ ಕಷ್ಟವಾಗಿದೆ. ಗ್ರಾನೈಟ್ ಮತ್ತು ಡೋಲೆರೈಟ್‌ನಂತಹ ಗಟ್ಟಿಯಾದ ಬಂಡೆಗಳೂ ಇದ್ದ ಕಾರಣದಿಂದ ಕಾಮಗಾರಿ ತಡವಾಗಿದೆ ಎಂದು ವರದಿ ತಿಳಿಸಿದೆ. ಸುರಂಗ ಬೋರಿಂಗ್ ಯಂತ್ರಗಳು (ಟಿಬಿಎಂಗಳು) 20.99 ಕಿ.ಮೀ ಅವಳಿ ಸುರಂಗಗಳನ್ನು ಪೂರ್ಣಗೊಳಿಸಿದೆ.
ಅಂತಿಮ ಕಾಮಗಾರಿ
ವರದಿ ಪ್ರಕಾರ, ನಿಲ್ದಾಣಗಳನ್ನು ಸರಾಸರಿ 59 ಅಡಿ ಆಳದಲ್ಲಿ ನಿರ್ಮಿಸಲಾಗುತ್ತಿದೆ. ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾದ ಎಂಜಿ ರಸ್ತೆ ನಿಲ್ದಾಣವು ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿರುತ್ತದೆ. ಎರಡೂ ಮಾರ್ಗಗಳ ನಡುವೆ ಪ್ರಯಾಣಿಕರನ್ನು ಸಂಪರ್ಕಿಸುತ್ತದೆ. ಅಂಡರ್‌ಗ್ರೌಂಡ್ ವಿಭಾಗದ ಕೆಲದ ಪ್ರಗತಿಯಲ್ಲಿದ್ದು, ಪ್ಲಾಸ್ಟರಿಂಗ್, ಫ್ಲೋರಿಂಗ್ ಮತ್ತು ಸಿಸ್ಟಮ್ ಇನ್‌ಸ್ಟಾಲೇಶನ್ ಸೇರಿದಂತೆ ಅಂತಿಮ ಕಾರ್ಯಗಳು ನಡೆಯುತ್ತಿವೆ.