ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯು ಪ್ರಮುಖ ಜಂಕ್ಷನ್ಗಳಲ್ಲಿ ಬೆಂಗಳೂರು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಗ್ನಲ್ಸ್ ಸಿಸ್ಟಂ(BATCS) ಅಳವಡಿಸಿದೆ. ಬೆಂಗಳೂರನ್ನು ಕಾಡುತ್ತಿರುವ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ಸಿಗಬಹುದೆನ್ನುವ ಕಾರಣಕ್ಕಾಗಿ ಈ ಸುಧಾರಿತ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಹಾಕಲಾಗಿದೆ.
ನೀವು ಇತ್ತೀಚಿಗೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಂತಾಗ ನಿಮಗೆ VAC ಮತ್ತು MNL ಎಂಬ ಹೊಸ ಸೂಚನೆಗಳನ್ನು ಗಮನಿಸಿರಬಹುದು. VAC ಮತ್ತು MNL ಅಂದರೆ ಏನು ಎಂದು ತಿಳಿದಿಕೊಳ್ಳಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
VAC ಅಂದರೆ ವೆಹಿಕಲ್ ಆ್ಯಕ್ಚುಯೇಟೆಡ್ ಕಂಟ್ರೋಲ್ (Vehicle Actuated Control) ಎಂದರ್ಥ. ಈ ಸಿಸ್ಟಂನಲ್ಲಿ ಅಳವಡಿಸಲಾಗಿರುವ ಕ್ಯಾಮರಾಗಳು ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳು ನಿಂತಿವೆಯೋ ಆ ರಸ್ತೆಯ ಪ್ರಯಾಣಿಕರಿಗೆ ಆದ್ಯತೆ ಮೇರೆಗೆ ಹಸಿರು ಸಿಗ್ನಲ್ ಪ್ರದರ್ಶಿಸುತ್ತದೆ
MNL ಅಂದರೆ ಮಾನ್ಯುಯಲ್ ಎಂದರ್ಥ. ಇದರಲ್ಲಿ ಪೊಲೀಸರೇ ಸಿಗ್ನಲ್ ಕಂಟ್ರೋಲ್ ಮಾಡುತ್ತಿರುತ್ತಾರೆ. ಆಂಬ್ಯುಲೆನ್ಸ್, ವಿಐಪಿಗಳ ಸಂಚಾರವಿದ್ದರೆ, ಟ್ರಾಫಿಕ್ ಪೊಲೀಸರೇ ಸಿಗ್ನಲ್ ಕಂಟ್ರೋಲ್ ಮಾಡುತ್ತಾರೆ.
ಕೆಲವು ಜಂಕ್ಷನ್‌ಗಳಲ್ಲಿ ಕಳೆದ ವರ್ಷವೇ ಅಳವಡಿಸಿದ ಈ ಸುಧಾರಿತ ಟ್ರಾಫಿಕ್ ಕಂಟ್ರೋಲ್ ಸಿಗ್ನಲ್ಸ್ ಸಿಸ್ಟಂನಲ್ಲಿ ಟೈಮರ್ ವ್ಯವಸ್ಥೆಯಿರಲಿಲ್ಲ. ಗ್ರೀನ್ ಸಿಗ್ನಲ್ ಯಾವಾಗ ಬೀಳುತ್ತೆ ಎನ್ನುವುದು ವಾಹನ ಸವಾರರಿಗೆ ಗೊತ್ತಾಗುತ್ತಿರಲಿಲ್ಲ. ಆದರೆ ಇತ್ತೀಚಿಗೆ ಅಳವಡಿಸಲಾಗುತ್ತಿರುವ ಬಹುತೇಕ ಜಂಕ್ಷನ್‌ಗಳಲ್ಲಿ ಟೈಮರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಿಂದ ವಾಹನ ಸವಾರರಿಗೂ ಅನುಕೂಲವಾಗಲಿದ್ದು, ಇಂಧನದ ಜೊತೆ ಸ್ವಲ್ಪ ಮಟ್ಟಿನ ಮಾಲಿನ್ಯ ಕೂಡ ಕಡಿಮೆಯಾಗುತ್ತೆ.