ಬೆಂಗಳೂರು: ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳುವುದಿಲ್ಲ ಎನ್ನುವ ಖಾತ್ರಿಯಿಂದ ಬಜೆಟ್ ಗಾತ್ರಕ್ಕಿಂತ ಏಳು ಪಟ್ಟು ಅಧಿಕ ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಮೂಲಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಜನರ ಬಾಯಿಗೆ ಮಣ್ಣು ಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಸರ್ಕಾರದಿಂದ ಮಹಿಳೆಯರು, ಜನರ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡಲಾಗುತ್ತಿದೆ ಎಂಬ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಗುಂಡೂರಾವ್, 2023ರಲ್ಲಿ ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಬೊಮ್ಮಾಯಿ ಅವರಿಗೆ ಗೊತ್ತಿತ್ತು. ಹಾಗಾಗಿ ಅಧಿಕಾರ ಬಿಡುವ ಮುನ್ನ ಬಜೆಟ್ ವೆಚ್ಚಕ್ಕಿಂತ 7 ಪಟ್ಟು ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಆ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಹಣ ಪಾವತಿ ಯಾರು ಮಾಡಬೇಕು? ಸ್ವಂತ ಖಜಾನೆಯಿಂದ ಕೊಡುವಂತೆ ಅಪ್ರಸ್ತುತ ಕಾಮಗಾರಿಗಳಿಗೆ ಅನುಮೋದನೆ ಕೊಟ್ಟಾಗ ಪ್ರಜ್ಞೆ ಇರಲಿಲ್ಲವೆ? ಇದು ಜನರ ಬಾಯಿಗೆ ಮಣ್ಣು ಹಾಕುವ ಕೆಲಸವಲ್ಲವೇ? ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.