ಕೋಲಾರ, ೦೯ ಫಬ್ರವರಿ : ಸಂವಿಧಾನದಲ್ಲಿ ಪತ್ರಕರ್ತರ ಸೇವೆ ಮಹತ್ತರವಾದ ಪಾತ್ರವನ್ನು ಹೊಂದಿದೆ. ಸಂವಿಧಾನದ ನಾಲ್ಕನೇ ಅಂಗವಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಹಿತದೃಷ್ಠಿಯಿಂದ ಸರ್ಕಾರಗಳು ಅಗತ್ಯ ಸೌಲಭ್ಯ ಹಾಗೂ ನೆರವು ನೀಡಬೇಕೆಂದು ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಅಜಯ್ ಅಭಿಪ್ರಾಯಪಟ್ಟರು.
ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಕರ್ನಾಟಕ ಸಂಪಾದಕ ಮತ್ತು ವರದಿಗಾರರ ಸಂಘದಿAದ ಹಮ್ಮಿಕೊಂಡಿದ್ದ ಪರ್ತಕರ್ತರ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ, ಅಭಿನಂಧನೆ ಸ್ವೀಕರಿಸಿ ಮಾತನಾಡಿದರು.
ಸಮಾಜದಲ್ಲಿ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಸಕಾಂಗ, ನ್ಯಾಯಂಗ, ಕಾರ್ಯಾಂಗ ಕಾರ್ಯವೈಖರಿಯನ್ನು ಸಕಾಲಕ್ಕೆ ನೈಜ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕ್ಷೇತ್ರ ಮಾಧ್ಯಮ ಕ್ಷೇತ್ರವಾಗಿದೆ ಎಂದರು.
ಕೇರಾ ಸಂಘದ ನಿಕಟ ಪೂರ್ವ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು ಮಾತನಾಡಿ ಕೇರಾ ಸಂಘ ರಾಜ್ಯದಲ್ಲಿ ಪ್ರಭಲವಾಗಿ ಬೆಳೆಯುತ್ತಿದ್ದು, ಎಲ್ಲಾ ರೀತಿಯ ಸರ್ಕಾರದ ಸೌಲಭ್ಯಗಳನ್ನು ಪತ್ರಕರ್ತರಿಗೆ ಹಾಗೂ ಗಡಿ ಭಾಗದ ಪತ್ರಕರ್ತರಿಗೆ ಜಾಹೀರಾತುಗಳನ್ನು ಸರ್ಕಾರದಿಂದ ಕೊಡಿಸುವಲ್ಲಿ ಕೇರಾ ಸಂಘದ ಪಾತ್ರ ಮಹತ್ವವಾದದ್ದು. ಹಾಗೂ ಕೆಲವು ಜಿಲ್ಲೆಗಳಲ್ಲಿ ಪತ್ರಕರ್ತರನ್ನು ಸಂಘಗಳ ಹೆಸರಿನಲ್ಲಿ ಒಡೆದು ಭವನಗಳನ್ನು ತಮ್ಮ ಸುಪರ್ಧಿಯಲ್ಲಿ ಇಟ್ಟುಕೊಂಡು ತಾರತಮ್ಯ ಮಾಡುತ್ತಿರುವುದು ಖಂಡನೀಯ. ಸಮಾಜದಲ್ಲಿ ಪತ್ರಕರ್ತರನ್ನು ಸಮಾನವಾಗಿ ಮತ್ತು ಸಮಾನತೆಯ ದೃಷ್ಠಿಯಿಂದ ನೋಡಬೇಕು ಆಗ ಮಾತ್ರ ಪತ್ರಕರ್ತ ವೃತ್ತಿಗೆ ಗೌರವ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರವನ್ನು ಉದ್ದೇಶಿಸಿ ಹಿರಿಯ ಪತ್ರಕರ್ತರಾದ ಪ್ರಜಾವಾಣಿ ಕೃಷ್ಣಮೂರ್ತಿ ಮತ್ತು ಪ್ರಕಾಶ್ ರವರು ಮಾತನಾಡಿ ಉದಯೋನ್ಮುಖ ಪತ್ರಕರ್ತರು ಪತ್ರಿಕೆ, ಬರವಣಿಗೆ ಮುಂತಾದವುಗಳ ಕಡೆ ಗಮನಹರಿಸಿ ಸುದ್ಧಿ ವಿಶ್ಲೇಷಣೆ ಮಾಡುವ ಬಗ್ಗೆ ತಿಳಿದುಕೊಂಡು ಸುದ್ಧಿಗಳನ್ನು ಪ್ರಕಟಿಸಬೇಕು. ಪ್ರಸ್ತುತ ಬೇರೊಬ್ಬರು ಮಾಡಿರುವ ಸುದ್ಧಿಗಳನ್ನೇ ನಕಲು ಮಾಡಿ ಬರೆಯುವ ಛಾಳಿಯನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಕೇರಾ ಸಂಘದ ಸಹ ಕಾರ್ಯದರ್ಶಿ ಎಂ.ಆರ್.ಚೇತನ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಕೇರಾ ಸಂಘವು ಆರು ವರ್ಷಗಳನ್ನು ಪೂರೈಸಿ ಏಳನೇ ವರ್ಷಕ್ಕೆ ಕಾಲಿಡುತ್ತಿದ್ದು, ಕೇರಾ ಸಂಘದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಿಕೊಂಡು ಬಂದಿರುವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿ ಜಿಲ್ಲೆಯ ಮುಳಬಾಗಿಲು ಮತ್ತು ಮಾಲೂರು ತಾಲೂಕುಗಳಲ್ಲಿ ಶಾಸಕರ ಸಹಕಾರದಿಂದ ಕೇರಾ ಸಂಘದ ಕಚೇರಿಗೆ ಕಟ್ಟಡ ನೀಡಿದ್ದು, ಬಂಗಾರಪೇಟೆ ಕ್ಷೇತ್ರದ ಶಾಸಕರು ನೂತನವಾಗಿ ಶಿಲಾನ್ಯಾಸ ಮಾಡಿರುವ ಪತ್ರಕರ್ತರ ಭವನದಲ್ಲಿ ಕಛೇರಿಗೆ ಕೊಠಡಿಯನ್ನು ನೀಡುವ ಭರವಸೆ ನೀಡಿದ್ದಾರೆ. ಜಿಲ್ಲೆಯ ಪ್ರತಿ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಪತ್ರಕರ್ತರಿಗೆ ಸಮಾನ ಹಕ್ಕು ನೀಡಲು ಪತ್ರಕರ್ತರ ಭವನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡಬೇಕಾಗಿದ್ದು, ಜಿಲ್ಲಾ ಕೇಂದ್ರದಲ್ಲಿರುವ ಪತ್ರಕರ್ತರ ಭವನವು ಒಂದು ಸಂಘಕ್ಕೆ ಸೀಮಿತ ಗೊಳಿಸಿ ಸರ್ಕಾರದ ಅನುದಾನಗಳಿಂದ ನಿರ್ಮಿಸಲಾಗಿರುವ ಸಾರ್ವಜನಿಕ ಸಮುದಾಯ ಭವನವನ್ನು ಎಲ್ಲರಿಗೂ ನೀಡುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕೇರಾ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಕನ್ನಡಮಿತ್ರ ವೆಂಕಟಪ್ಪ, ಕೋಲಾರ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಹೆಚ್.ಜಿ. ಪ್ರಕಾಶ್, ಹಾಗೂ ಸಮಾಜ ಸೇವಕ ರವೀಂದ್ರ ರೆಡ್ಡಿ ರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ನಾರಾಯಣಸ್ವಾಮಿ ಮಾತನಾಡಿದರು. ಕೇರಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಕಾರ್ಯದರ್ಶಿ ಸುಮಾ ಪುರುಷೋತ್ತಮ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಉಮೇಶ್, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಕಾಂತರಾಜ್, ಟೈಗರ್ ಮಂಜು, ಸುನಿಲ್ ಕುಮಾರ್, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಮುಳಬಾಗಿಲು ತಾಲೂಕು ಪ್ರಧಾನ ಕಾರ್ಯದರ್ಶಿ ಜುಲ್ಫಿಕರ್, ಆದೀಲ್ ಪಾಷ, ಜಗದೀಶ್, ಪ್ರವೀಣ್, ಕೋಲಾರ ಜಿಲ್ಲಾ ಘಟಕದ ಉಪಾಧ್ಯಕ್ಷ ಆಲ್ಪರ್ಟ್ ಮನೋರಾಜ್, ಗೌರವಾಧ್ಯಕ್ಷ ರಾಜಕುಮಾರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಂಜುಳ, ಡಾ.ಶ್ರೀನಿವಾಸ್, ಚಂದ್ರಶೇಖರ್, ಮುರಳಿ, ಸುಧಾ, ಸೌಭಾಗ್ಯಮ್ಮ, ಅರ್ಚನಾ ಹಾಜರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಟ್ಟಹಳ್ಳಿ ಶ್ರೀನಿವಾಸ್ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಮಾ.ಶಾ ರಾಜಗೋಪಾಲ್ ವಂದಿಸಿದರು.