ಕುಳಾಯಿ – ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಸಿಂದನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ ಸಾವು
ಮಂಗಳೂರು ಫೆಬ್ರವರಿ 23: ಊಟ ಮುಗಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸಿಂದನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ ದೀಪುಗೌಡ (50) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಂಗಳೂರಿನಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ಭೇಟಿಯಾಗಲು ತೆರಳಿದ್ದ ಸಿಂಧನೂರಿನ ದೀಪುಗೌಡ, ಕಾರಟಗಿಯ ಪ್ರದೀಪ್ ಕೋಲ್ಕರ್ ಮತ್ತು ಗಂಗಾವತಿಯ ಸಮರ್ಥ ಮೋಟಾರ್ಸ್ ಮಾಲೀಕ ರಂಘುನಾಥ ಆಗಮಿಸಿದ್ದರು. ಮೂವರು ಕುಳಾಯಿಯ ಶಂಕರ ಭವನ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಉಡುಪಿ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವೊಂದು ಅತೀವೇಗದಿಂದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೀಪು ಗೌಡ ಪ್ರದೀಪ್ ಮತ್ತು ನಾಗರಾಜ್ ರವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪ್ರದೀಪ್ ಮತ್ತು ನಾಗರಾಜ್ ರವರು ರಸ್ತೆಗೆ ಎಸೆಯಲ್ಪಟ್ಟರೆ , ದೀಪು ಗೌಡ ಕಾರಿನ ಜೊತೆಯೇ ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದೀಪು ಗೌಡ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನಪ್ಪಿದ್ದಾರೆ.