Property Registration: ಫೆ.27ರಿಂದ ರಾಜ್ಯದಲ್ಲಿ ಅಸ್ತಿ ನೋಂದಣಿ ಬಂದ್!‌ ಕಾರಣ ಇಲ್ಲಿದೆ

Bhima Samskruthi
By -
0

ಕಾವೇರಿ-2 ತಂತ್ರಾಂಶದಲ್ಲಿನ ಸಮಸ್ಯೆ, ಫೇಸ್‌ಲೆಸ್‌ ರಿಜಿಸ್ಟ್ರೇಷನ್‌, ಇಸಿ, ಸಿಸಿ ವಿತರಿಸಲು ಉಂಟಾಗುತ್ತಿರುವ ಸರ್ವರ್‌ ಸಮಸ್ಯೆ, ಐಟಿ ಅಧಿಕಾರಿಗಳು ಮಾಹಿತಿ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಹಾಗೂ ಉಪ ನೋಂದಣಾಧಿಕಾರಿಗಳ ವರ್ಗಾವಣೆಗಳಿಗೂ ಪ್ರತ್ಯೇಕ ನಿಯಮಗಳನ್ನು ರೂಪಿಸಲು ಆಗ್ರಹಿಸಿ ಮುಷ್ಕರ ಹೂಡಲಾಗುತ್ತಿದೆ.

ನಿಯಮಗಳನ್ನು ಮೀರಿ ಕಾವೇರಿ-2 ತಂತ್ರಾಂಶದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಇದರಲ್ಲಿ ಉಂಟಾಗುವ ಸಮಸ್ಯೆಗಳಿಗೆ ಉಪ ನೋಂದಣಾಧಿಕಾರಿಗಳು ತಮ್ಮ ಪ್ರಮೇಯವೇ ಇಲ್ಲದೆ ನ್ಯಾಯಾಲಯಗಳಲ್ಲಿ ನಿಲ್ಲುವಂತಾಗಿದೆ. ಪದೇ ಪದೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ವೈದ್ಯಕೀಯ ಅಧಿಕಾರಿಗಳು, ಪೊಲೀಸರು, ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಸಿಬ್ಬಂದಿ ವರ್ಗಾವಣೆ ಕಾಯ್ದೆಗಳಿವೆ. ಆದರೆ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಯಾವುದೇ ನಿಯಮಗಳಿಲ್ಲ. ಹೀಗಾಗಿ ಪ್ರತ್ಯೇಕ ನಿಯಮ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.

ಅಧಿಕಾರಿಗಳಿಂದ ಧರಣಿ

ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶವಿದ್ದರೂ ಕರ್ತವ್ಯ ನಿರ್ವಹಿಸಲು ಚಲನಾದೇಶ ಹಾಗೂ ಲಾಗಿನ್‌ ಐಡಿ ನೀಡದ ಹಿನ್ನೆಲೆಯಲ್ಲಿ ಹಲವು ಹಿರಿಯ ಉಪ ನೋಂದಣಾಧಿಕಾರಿಗಳು ಗುರುವಾರ ರಾತ್ರಿ ನೋಂದಣಿ ಇಲಾಖೆ ಕೇಂದ್ರ ಕಚೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಕಂದಾಯ ಭವನದಲ್ಲಿರುವ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಅವರು, ಡಿ.10 ರಂದು ಹೊರಡಿಸಿರುವ ವರ್ಗಾವಣೆ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ. ಹೀಗಿದ್ದರೂ ವಾಪಸ್‌ ತಮ್ಮ ತಮ್ಮ ಸ್ಥಾನಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ವರ್ಗಾವಣೆಗೊಂಡಿದ್ದ ನೋಂದಣಾಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ. ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಗೂ ಆಯುಕ್ತ ಕೆ.ದಯಾನಂದ್‌ ದ್ವೇಷ ಸಾಧಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಅಧಿಕಾರಿಗಳು ದೂರಿದರು. ಈ ಬಗ್ಗೆ ಕಂದಾಯ ಸಚಿವರಿಗೆ ದೂರು ನೀಡಿ ಶುಕ್ರವಾರ ಸಂಜೆ ಧರಣಿ ಹಿಂಪಡೆದಿದ್ದು, ಫೆ.27ರಿಂದ ಮುಷ್ಕರದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.


Tags:

Post a Comment

0Comments

Post a Comment (0)