ಬೆಂಗಳೂರು :ಎಸ್ ಎಸ್ ಕಲಾ ಸಂಗಮ ಹಾಗೂ ಅಮ್ಮನ ಆಶ್ರಮ ಚಾರಿಟಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜರತ್ನ ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಅಪ್ಪು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚಿಗೆ ನಯನ ಸಭಾಂಗಣದಲ್ಲಿ ನಡೆಯಿತು.
ಅಂದು ನಡೆದ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು, ಮಾ. ಲೋಹಿತ್ ಹೆಸರಿನಲ್ಲಿ ಬಾಲನಟನಾಗಿ ಬಂದು ನಂತರ ಪುನೀತ್ ರಾಜ್ ಕುಮಾರ್ ಆಗಿ ತನ್ನ ಕಿರಿ ವಯಸ್ಸಿನಲ್ಲೇ ಅವರು ಮಾಡಿದ ಸಮಾಜ ಸೇವೆ ಎಷ್ಟೆ ಯುಗ ಕಳೆದರೂ ಮರೆಯಲು ಸಾಧ್ಯವಿಲ್ಲ. ಹಾಗೆ ಅವರ ನೆನಪುಗಳನ್ನು ಕೂಡ ಎಂದರು.
ಅಪ್ಪು ಅವರನ್ನು ನಾನು ಚಿಕ್ಕವಯಸ್ಸಿನಿಂದಲೂ ಹತ್ತಿರದಿಂದ ನೋಡಿದ್ದೇನೆ. ನನ್ನ ಪತಿ ಲೋಕೇಶ್ ಅವರ ಜೊತೆಗೆ ನಟಿಸಿದ ಭೂಮಿಗೆ ಬಂದ ಭಗವಂತ ಚಿತ್ರದಲ್ಲಿ ಅವರ ಅಭಿನಯ ಮರೆಯಲಾಗದು. ಎರಡು ನಕ್ಷತ್ರಗಳು ಚಿತ್ರದಲ್ಲಿನ ದ್ವಿಪಾತ್ರವನ್ನೂ ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಪ್ಪು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗಬಾರದಿತ್ತು. ತನ್ನ ವಯಸ್ಸಿಗೆ ಮೀರಿಮಾಡಿದ ಸಾಧನೆ ಅವರನ್ನು ಎಂದೆಂದಿಗೂ ಜೀವಂತವಾಗಿ ಇರಿಸಲಿದೆ. ಅವರ ಸಾವಿನ ಸುದ್ದಿ ಕೇಳಿ ಇಡೀ ಕರುನಾಡೇ ಕಂಬನಿ ಮಿಡಿಯಿತು ಎಂದು ಭಾವುಕರಾದರು.
ಅಪ್ಪು ಎಲ್ಲಾ ಕಲಾವಿದರಿಗೂ ಒಂದು ಮಾದರಿಯಾಗಿದ್ದಾರೆ. ಸಿನೆಮಾ ಶೋಟಿಂಗ್ ಸಮಯದಲ್ಲಿ ಬಹಳ ಲವಲವಿಕೆಯಿಂದ ಇರುತ್ತಿದ್ದರು. ಹಾಗೇ ಸೆಟ್ ನಲ್ಲಿ ಇರುವ ಎಲ್ಲರನ್ನೂ ಮಾತನಾಡಿಸುತ್ತ ಸದಾ ತಾನು ಖುಷಿಯಿಂದ ಇದ್ದು ಇತರರನ್ನು ಖುಷಿಯಾಗಿ ಇರಿಸುತ್ತಿದ್ದ ಡಾ. ರಾಜ್ ಕುಮಾರ್ ಅವರನ್ನ ಬಿಟ್ರೆ ನಂತರ ಈ ನಮ್ಮ ಅಪ್ಪು ಇರುತ್ತಿದ್ದರು. ಡಾ. ರಾಜ್ ಕುಮಾರ್ ಅವರ ಎಲ್ಲ ಗುಣಗಳನ್ನು ಹೊತ್ತುಕೊಂಡು ಬಂದಂತೆ ಇದ್ದು, ಇವರಲ್ಲಿ ಅಣ್ಣವರನ್ನು ಕಾಣಬಹುದಿತ್ತು ಎಂದು ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.
ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಬಿಟ್ಟು ಹೋಗಿರುವ ಸಿನೆಮಾ, ಡ್ಯಾನ್ಸ್, ಅವರ ಸಂಭಾಷಣೆ, ಸಮಾಜ ಸೇವೆ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದಿದೆ. ಅವರು ನಮ್ಮನ್ನು ಬಿಟ್ಟು ಹೋಗಿಲ್ಲ, ನಮ್ಮೊಂದಿಗೆ ಇಲ್ಲೇ ಎಲ್ಲೋ ಇದ್ದಾರೆ ಎಂಬ ಭಾವನೆ ನನಗಿದೆ. ಏಕೆಂದರೆ ಅವರ ನಗುಮುಖ ಎಂತವರನ್ನು ಮೂಡಿ ಮಾಡುವಂತೆ ಇತ್ತು ಎಂದು ಅವರ ನೆನಪುಗಳನ್ನು ಹಂಚಿಕೊಂಡರು.
ಕೊನೆಗೆ ಬಾಲ ನಟನಾಗಿ ಅಭಿನಯಿಸಿ, ಸ್ವತಃ ತಾವೇ ಹಾಡಿದ್ದ ಅಪ್ಪು ರವರ "ಕಾಣದಂತೆ ಮಾಯಾವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು ಕೈಯ್ಯ ಕಟ್ಟಿ ಓಡಿ ಹೋದನು ನಮ್ಮ ಶಿವ " ಹಾಡನ್ನು ಹಾಡಿ ಎಲ್ಲರನ್ನೂ ಮತ್ತೆ ನೆನಪಿನ ಅಂಗಳಕ್ಕೆ ಕರೆದೋಯ್ದರು.
ಇದೆ ಸಂದರ್ಭದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರಿಗೆ ಸನ್ಮಾನಿಸಲಾಯಿತು. ಮಕ್ಕಳಿಂದ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಶಿಧರ್ ಕೋಟೆ, ವಿಜಯನಗರ ಆಸ್ಪತ್ರೆಯ ಮುಖ್ಯಸ್ಥ ಡಾ. ರಾಜು, ಹಿರಿಯ ಹಾಸ್ಯ ಕಲಾವಿದ ಮೈಸೂರು ರಮಾನಂದ್, ಆಯುರ್ವೇದಿಕ್ ಏರ್ ಆಯಿಲ್ ನ ಸಂಸ್ಥಾಪಕಿ ಆಶಾ. ಕೆ, ಮಾಡೆಲ್ ವೈ ಕೆ ವಿಜಯ ಲಕ್ಷ್ಮಿ, ಸಮಾಜ ಸೇವಕಿ ಶುಭ ಕೃಪೇಶ್, ಕಾರ್ಯಕ್ರಮ ಆಯೋಜಕರಾದ ಅಮ್ಮನ ಆಶ್ರಮ ಚಾರಿಟೇಬಲ್ ಟ್ರಸ್ಟ್ ಲಕ್ಷ್ಮಿ ದೇವಮ್ಮ (ಸುಧಾ ತ್ಯಾಗರಾಜ್ ) ಎಸ್ ಎಸ್ ಕಲಾ ಸಂಗಮದ ಸಂಸ್ಥಾಪಕ, ನಟ, ನಿರ್ಮಾಪಕ ಸ್ಮೈಲ್ ಶಿವು ಉಪಸ್ಥಿತರಿದ್ದರು.
ಮೌರ್ಯ ಪೂಜಾರಿ ಹಾಗೂ ಆಶಾನವೀನ್ ನಿರೂಪಣೆ ಮಾಡಿದರು.