ಡ್ರಿಂಕ್ ಆ್ಯಂಡ್ ಡ್ರೈವ್ ಗೆ 15 ಸಾವಿರ ರೂ., ಮಾಲಿನ್ಯ ಪ್ರಮಾಣಪತ್ರ ಇಲ್ಲದಿದ್ರೆ 10 ಸಾವಿರ ರೂ. ದಂಡ - ಮಾ.1ರಿಂದ ಜಾರಿ
ಹೊಸದಿಲ್ಲಿ: ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ಶಿಕ್ಷೆ ಹಾಗೂ ದಂಡದ ಪ್ರಮಾಣವನ್ನು ಪರಿಷ್ಕರಿಸಲಾಗಿದೆ. ಹೊಸ ಪರಿಷ್ಕರಣೆಗಳು ಮಾ. 1ರಿಂದ ಜಾರಿಗೆ ಬರಲಿವೆ. ಅದರಂತೆ, ಇನ್ನು, ಡ್ರಿಂಕ್ ಆ್ಯಂಡ್ ಡ್ರೈವ್ ತಪ್ಪಿಗೆ 10,000 ರೂ. ದಂಡ ಅಥವಾ 6 ತಿಂಗಳು ಜೈಲು ವಾಸ ಗ್ಯಾರಂಟಿ. ವಿಶೇಷ ಸಂದರ್ಭಗಳಲ್ಲಿ ಇವೆರಡನ್ನೂ ವಿಧಿಸುವ ಸಾಧ್ಯತೆಯಿರುತ್ತದೆ.
ಮೊದಲು ಡಿಂಕ್ ಆ್ಯಂಡ್ ಡ್ರೈವ್ ಗೆ 1,000 ರೂ.ಗಳಿಂದ 1,500 ರೂ.ವರೆಗೆ ದಂಡ ವಿಧಿಸಲಾಗುತ್ತಿತ್ತು. ಆದರೆ, ಈ ಮೊತ್ತವನ್ನು 10 ಸಾವಿರ ರೂ.ಗಳಿಗೆ ಏರಿಸಿದ್ದಲ್ಲದೆ, ಜೈಲು ವಾಸವನ್ನು ಕಡ್ಡಾಯಗೊಳಿಸುವ ವಿಚಾರವನ್ನೂ ಪರಿಷ್ಕರಣೆಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ಇದು ಮೊದಲ ಬಾರಿಗೆ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ದವರಿಗೆ ಮಾತ್ರ ಅನ್ವಯ. ಮತ್ತೆ ಇಂಥದ್ದೇ ತಪ್ಪು ಮಾಡಿರುವುದು ಗೊತ್ತಾದರೆ ದಂಡದ ಪ್ರಮಾಣ 20 ಸಾವಿರ ರೂ.ಗಳಿಗೆ ಹೋಗುತ್ತೆ. ಜೊತೆಗೆ, ಎರಡು ವರ್ಷ ಜೈಲು ಶಿಕ್ಷೆ ನೀಡುವ ಸಾಧ್ಯತೆಗಳೂ ಇರುತ್ತವೆ.ವಾಹನ ಚಲಾಯಿಸುತ್ತಾ ಮೊಬೈಲ್ ಫೋನ್ ಬಳಸುತ್ತಿದ್ದರೆ ಅವರಿಗೆ ಮೊದಲ ಬಾರಿಯ ತಪ್ಪಿಗೆ 1,000 ರೂ. ಆನಂತರದ ತಪ್ಪುಗಳಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ 1,000 ರೂ. ದಂಡ ಬೀಳಲಿದೆ.