ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಎ -ಖಾತಾ, ಬಿ -ಖಾತಾ ಹಾಗೂ ಇ -ಖಾತಾ ವಿಚಾರಗಳ ಬಗ್ಗೆ ಭಾರೀ ಚರ್ಚೆ ನಡೆದಿವೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ ಖಾತಾ ಕಡ್ಡಾಯ ಮಾಡಿದೆ. ಅಲ್ಲದೆ ಅನಧಿಕೃತ ನಿವೇಶನ ಹಾಗೂ ರೆವಿನ್ಯೂಗಳಿಗೆ ಕಡ್ಡಾಯವಾಗಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಬಿ - ಖಾತಾ ನೀಡಬೇಕು ಎಂದು ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೆ, ಏಕಕಾಲಕ್ಕೆ ಎ,ಬಿ ಹಾಗೂ ಇ ಖಾತಾಗಳ ಬಗ್ಗೆ ಚರ್ಚೆ ನಡೆಯುತ್ತಿರುವುದು ಜನರಲ್ಲೂ ಗೊಂದಲ ಮೂಡಿಸಿದೆ. ಹಾಗಾದರೆ ಏನಿದು ಎ ಖಾತೆ, ಬಿ ಖಾತೆ ಹಾಗೂ ಇ ಖಾತೆ. ಯಾವ ಸಮಯದಲ್ಲಿ ಯಾವ ಖಾತೆಯನ್ನು ಬಳಸಲಾಗುತ್ತದೆ ಮತ್ತು ಯಾವ ಖಾತೆ ಸುರಕ್ಷಿತ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದಲ್ಲಿ ಖಾತೆಗಳ ವಿಚಾರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಖಾತಾಗಳ ಬಗ್ಗೆ ಜನರಲ್ಲಿ ಗೊಂದಲ ಇದೆ. ಆ ಎಲ್ಲಾ ಗೊಂದಲಗಳಿಗೆ ಇಲ್ಲಿ ಉತ್ತರ ಇದೆ. ಖಾತಾ ಪ್ರಮಾಣ ಪತ್ರ ಎನ್ನುವುದು ಆಸ್ತಿ ಮಾಲೀಕತ್ವ ಹಾಗೂ ಆ ಆಸ್ತಿಯ ನಿಖರ ಮಾಹಿತಿಯಾಗಿದೆ. ಬಿಬಿಎಂಪಿ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳು ನೀಡುವ ಈ ಪ್ರಮಾಣಪತ್ರದಲ್ಲಿ ಆಸ್ತಿಯ ಗಾತ್ರ, ಯಾವ ಪ್ರದೇಶ, ಸ್ಥಳ ಹಾಗೂ ಆ ಆಸ್ತಿ ವಸತಿ ಅಥವಾ ವಾಣಿಜ್ಯ ಯಾವ ವ್ಯಾಪ್ತಿಗೆ ಸೇರಿದೆ ಎನ್ನುವುದು ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯೂ ಅದರಲ್ಲಿ ಇರುತ್ತದೆ.
ಬೆಂಗಳೂರಿನಲ್ಲಿ ಹಾಗೂ ರಾಜ್ಯದಲ್ಲಿ A ಖಾತಾ A ಮತ್ತು B ಆಸ್ತಿ ದಾಖಲೆ ಎಂದು ವಿಭಜಿಸಲಾಗಿದೆ. ಆದರೆ E-ಖಾತಾ ಎನ್ನುವುದು A ಖಾತಾದ ಡಿಜಿಟಲ್ ಆವೃತ್ತಿಯಾಗಿದೆ. ರಾಜ್ಯದಲ್ಲಿ ಇದೀಗ ಆಸ್ತಿ ನೋಂದಣಿಗೆ E-ಖಾತಾ ಕಡ್ಡಾಯವಾಗಿದೆ
ಎ - ಖಾತಾ ಎಂದರೇನು. ಎ ಖಾತೆಯ ಪ್ರಾಮುಖ್ಯತೆ ಏನು ?
* ಎ ಖಾತಾ ಎನ್ನುವುದು ಆಸ್ತಿ ಕಾನೂನು ಬದ್ಧವಾಗಿದೆ ಎಂದು ತೋರಿಸುತ್ತದೆ. ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸಿದ್ದಾರೆ ಎನ್ನುವುದನ್ನು ಪ್ರಮಾಣೀಕರಿಸುವ ದಾಖಲೆ ಇದಾಗಿದೆ.
* ಅಲ್ಲದೆ ಎ - ಖಾತಾ ಇದ್ದರೆ ಆ ಕಟ್ಟಡಗಳನ್ನು ಕಾನೂನುಬದ್ಧವಾಗಿ ನಿರ್ಮಾಣ ಮಾಡಲಾಗಿದೆ ಮತ್ತು ಸರಿಯಾಗಿ ತೆರಿಗೆ ದಾಖಲೆಗಳನ್ನು ಹೊಂದಿರುವ ಆಸ್ತಿ ಎಂದು ಗುರುತಿಸಲಾಗುತ್ತದೆ.
*ಎ ಖಾತಾ ಇದ್ದರೆ ಆಸ್ತಿ ಮಾಲೀಕರು ಕಟ್ಟಡ ಪರವಾನಗಿಗಳು, ವ್ಯಾಪಾರ ಪರವಾನಗಿಗಳು ಮತ್ತು ಸಾಲಗಳಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ನಲ್ಲಿ ಸಾಲ ಹಾಗೂ ಸರ್ಕಾರದ ಸೌಲಭ್ಯಗಳು ಸಿಗುತ್ತವೆ.
ಬಿ ಖಾತಾ ಎಂದರೇನು, ಬಿ - ಖಾತೆ ಇದ್ದರೆ ಸಂಕಷ್ಟವೇ ?
ಬಿ ಖಾತಾ ಎಂಬುದು ಅಕ್ರಮ ಅಥವಾ ಅರೆ-ಕಾನೂನು ಆಸ್ತಿ ಅಥವಾ ನಿವೇಶನ ಎಂದು ಪರಿಗಣಿಲಾಗುತ್ತದೆ.
* ಅನುಮೋದನೆಗಳಿಗಾಗಿ ಬಾಕಿ ಉಳಿಸಲಾಗಿರುವ ಆಸ್ತಿಗಳನ್ನು ಬಿ ಖಾತಾ ವ್ಯಾಪ್ತಿಯಲ್ಲಿ ತರಲಾಗಿದೆ
*2014ರಲ್ಲಿ ಕರ್ನಾಟಕ ಹೈಕೋರ್ಟ್ ಬಿ ಖಾತಾ ಆಸ್ತಿಗಳನ್ನು ಕಾನೂನುಬಾಹಿರ ಎಂದು ಹೇಳಿತ್ತು.
* ಅನಧಿಕೃತ ನಿವೇಶನ ಹಾಗೂ ಬಡಾವಣೆಗಳನ್ನು ಬಿ ಖಾತಾ ವ್ಯಾಪ್ತಿಗೆ ತರಲಾಗಿದೆ.
ಇ -ಖಾತಾ ಎಂದರೇನು ?
* ಇ-ಖಾತಾ ಎನ್ನುವುದು ಆಸ್ತಿ ವಿವರಗಳನ್ನು ಡಿಜಿಟಲೀಕರಣಗೊಳಿಸುವ ಆನ್‌ಲೈನ್ ವ್ಯವಸ್ಥೆಯಾಗಿದೆ.
* ಇ-ಖಾತಾ ಆಸ್ತಿ ನೋಂದಣಿ, ತೆರಿಗೆ ಪಾವತಿ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಣ ಮಾಡುತ್ತದೆ. ಇದರಿಂದ ಆಸ್ತಿ ಮಾರಾಟ ಹಾಗೂ ಖರೀದಿ ಮಾಡುವುದಕ್ಕೆ ಸಹಾಯ ಆಗುತ್ತದೆ.
* ಇ-ಖಾತಾ ಆಸ್ತಿ ಪಾರದರ್ಶಕತೆಯನ್ನು ಸೂಚಿಸುತ್ತದೆ. ಅಲ್ಲದೆ ಆಸ್ತಿ ಲೋಪಗಳನ್ನು ಕಡಿಮೆ ಮಾಡುತ್ತದೆ.
* ಇ-ಖಾತಾ ಆಸ್ತಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವಾಗ ಮೋಸ ಹೋಗದಂತೆ ತಡೆಯುತ್ತದೆ.